ನಾಯಿಯ ವಿಚಾರಕ್ಕೆ ಶುರುವಾಯ್ತು ಕೋಲು ಕಾಳಗ!
ಅಂಕೋಲಾ: ನಾಯಿಯೊಂದು ಕಚ್ಚಲು ಬಂದಿತು ಎಂಬ ಕಾರಣಕ್ಕೆ ಅದಕ್ಕೆ ಕೋಲಿನಿಂದ ಹೊಡೆದಿದ್ದೇ ತಡ, ಅದರ ಮಾಲೀಕನ ಆಕ್ರೋಶಕ್ಕೆ ರೈತನೊಬ್ಬ ಕೋಲಿನೇಟು ತಿಂದಿರುವ ಘಟನೆ ತಾಲೂಕಿನ ಶಿರಗುಂಜಿಯಲ್ಲಿ ನಡೆದಿದೆ.
ಘಟನೆಗೆ ಸಂಬAಧಿಸಿದ0ತೆ ಶಿರಗುಂಜಿಯ 54 ವರ್ಷದ ಮಹಿಳೆಯೊಬ್ಬರು ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಶಿರಗುಂಜಿಯ ಸಂದೀಪ ಈಶ್ವರ ನಾಯಕ ಅವರ ವಿರುಧ್ದ ಪಿಎಸೈ ಗುರುನಾಥ ಹಾದಿಮನಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ದೂರಿನ ಪ್ರಕಾರ, ಆ.29 ರಂದು ಸಂಜೆ ಸುಮಾರು 5 ಗಂಟೆ ವೇಳೆಗೆ ಮಹಿಳೆಯ ಪತಿ ಅಶೋಕ ನಾಯಕ ಅವರು ಮೇಯಲು ಹೋಗಿದ್ದ ತಮ್ಮ ದನಕರುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಲು ತೆರಳಿದ್ದರು. ಈ ವೇಳೆ ಸ್ಥಳದಲ್ಲಿದ್ದ ನಾಯಿಯೊಂದು ಅವರನ್ನು ಕಚ್ಚಲು ಬಂದಿದ್ದರಿ0ದ, ಅವರು ಕೋಲಿನಿಂದ ನಾಯಿಯನ್ನು ದೂರ ಓಡಿಸಲು ಹೊಡೆದಿದ್ದಾರೆ ಎನ್ನಲಾಗಿದೆ.
ಇದರಿಂದ ಕೆರಳಿದ ನಾಯಿಯ ಮಾಲೀಕ ಸಂದೀಪ ಈಶ್ವರ ನಾಯಕ ಅವರು ಕೊಟ್ಟಿಗೆಗೆ ಬಂದು ಅಶೋಕ ಅವರನ್ನು ಹೊರಕ್ಕೆ ಎಳೆದುಕೊಂಡು ಹೋಗಿ, ನಿಂದಿಸಿ, ಕೋಲಿನಿಂದ ಬೆನ್ನು ಹಾಗೂ ಕಾಲಿಗೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇಷ್ಟಕ್ಕೇ ‘ನಾಯಿ ವಿಚಾರ’ ಮುಗಿಯದೆ, ಇನ್ನು ಮುಂದೆ ತಮ್ಮ ನಾಯಿಯ ವಿಚಾರಕ್ಕೆ ಬಂದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಘಟನೆ ನಡೆಯುತ್ತಿದ್ದ ವೇಳೆ ಅಶೋಕ ಅವರ ಪತ್ನಿ ಕೂಗಿಕೊಂಡಾಗ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಬರುತ್ತಿರುವುದನ್ನು ಕಂಡು ಆರೋಪಿ ಕೋಲನ್ನು ಅಲ್ಲಿಯೇ ಬಿಟ್ಟು ತೆರಳಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ಒಟ್ಟಿನಲ್ಲಿ ಶಿರಗುಂಜಿಯಲ್ಲಿ ನಡೆದ ಈ ‘ನಾಯಿ–ಕೋಲು’ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಘಟನೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

