ಗೋಕರ್ಣ ಮಹಾಗಣಪತಿ ದೇವಸ್ಥಾನದಲ್ಲಿ ಕಳ್ಳತನ:
Oplus_16908288
ಗೋಕರ್ಣ ಮಹಾಗಣಪತಿ ದೇವಸ್ಥಾನದಲ್ಲಿ ಕಳ್ಳತನ:
ವಕೀಲರ ಬ್ಯಾಗ್ನಿಂದ ₹1.95 ಲಕ್ಷ ಮೌಲ್ಯದ ಚಿನ್ನ, ನಗದು ಎಗರಿಸಿದ ಕಳ್ಳರು

ಗೋಕರ್ಣ: ಪುರಾಣ ಪ್ರಸಿದ್ಧ ಗೋಕರ್ಣದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ವಕೀಲರೊಬ್ಬರ ಬ್ಯಾಗ್ನಿಂದ ಚಿನ್ನಾಭರಣ ಹಾಗೂ ನಗದು ಹಣ ಕಳವು ಮಾಡಿರುವ ಘಟನೆ ಮಂಗಳವಾರ ನಡೆದಿದೆ.
ಬೆಂಗಳೂರಿನ ವಸಂತನಗರದ 3 ನೇ ಕ್ರಾಸ್ ನಿವಾಸಿ, ನ್ಯಾಯವಾದಿ ಮಂಜುಳಾ ರಾವಸಾಹೇಬ ಶಿಂಧೆ ಅವರು ಗೋಕರ್ಣದ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ದೇವರ ದರ್ಶನ ಪಡೆಯಲು ತೆರಳಿದ್ದರು.
ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಸಂದರ್ಭದಲ್ಲಿ ಯಾರೋ ಕಳ್ಳರು ಅವರ ಬ್ಯಾಗ್ನಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದಾರೆ.
ಕಳ್ಳತನವಾಗಿರುವ ವಸ್ತುಗಳಲ್ಲಿ 25 ಗ್ರಾಂ ತೂಕದ ಲಾಕೆಟ್ ಇರುವ ಒಂದು ಬಂಗಾರದ ಚೈನ್, ಅಂದಾಜು ₹1.80 ಲಕ್ಷ ಮೌಲ್ಯ, ಹಾಗೂ ₹15 ಸಾವಿರ ನಗದು ಹಣ ಸೇರಿದೆ. ಒಟ್ಟು ಸುಮಾರು ₹1.95 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ದೇವಸ್ಥಾನದಲ್ಲಿ ಭಕ್ತರ ದಟ್ಟಣೆ ಹಾಗೂ ಸರತಿ ಸಾಲಿನ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಕಳ್ಳರು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಮಂಜುಳಾ ಅವರು ಪೊಲೀಸರಿಗೆ ದೂರು ನೀಡಿದ್ದು ಎಎಸೈ ಲಕ್ಷ್ಮಿ ರಾಮಾ ಗುನಗಿ ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ.
ಭಕ್ತರ ದಟ್ಟಣೆಯನ್ನೇ ಗುರಿಯಾಗಿಸಿಕೊಂಡು ಕಳ್ಳರು ಕೈಚಳಕ ತೋರಿಸಿರುವುದು ದೇವಸ್ಥಾನಕ್ಕೆ ಆಗಮಿಸುವ ಭಕ್ತರಲ್ಲಿ ಆತಂಕ ಮೂಡಿಸಿದೆ.
ದೇವಸ್ಥಾನದಲ್ಲಿ ಭದ್ರತೆ ಹಾಗೂ ನಿಗಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸುವ ಅಗತ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
