ಮಾನವೀಯತೆ ಮೆರೆದ ಗಣಪತಿ ನಾಯ್ಕ; ಕಳೆದುಹೋದ ₹7 ಸಾವಿರ ವೃದ್ಧನಿಗೆ ವಾಪಸ್

ಅಂಕೋಲಾ: ಇಂದಿನ ದಿನಗಳಲ್ಲಿ ಕಳೆದುಹೋದ ಹಣ ಅಥವಾ ವಸ್ತುಗಳು ಮರಳಿ ಸಿಗುವುದು ಅಪರೂಪ. ಆದರೆ ಕೇಣಿ ಕ್ರಾಸ್‌ನ ಗಣಪತಿ ಮಂಡಿಯ ಮಾಲೀಕರಾದ ಗಣಪತಿ ಹನುಮಂತ ನಾಯ್ಕ (ನದಿಭಾಗ) ಅವರು ಕಳೆದುಹೋದ ₹7 ಸಾವಿರವನ್ನು ಅದರ ಮಾಲೀಕರಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಹಾಗೂ ಮಾನವೀಯತೆಗೆ ಮಾದರಿಯಾಗಿದ್ದಾರೆ.
ಪಳ್ಳಿಕೇರಿ ಗ್ರಾಮದ ವೃದ್ಧ ರಾಮಚಂದ್ರ ನಾಯ್ಕ ದಿನಸಿ ಸಾಮಾನು ಖರೀದಿಸಲು ಕೇಣಿ ಕ್ರಾಸ್‌ನಲ್ಲಿರುವ ಗಣಪತಿ ಮಂಡಿಗೆ ಬಂದಿದ್ದರು. ಖರೀದಿ ಮುಗಿಸಿ ತೆರಳುವ ವೇಳೆ ಅವರ ಜೇಬಿನಿಂದ ₹7 ಸಾವಿರ ನಗದು ಕೆಳಗೆ ಬಿದ್ದಿದ್ದು, ಅವರಿಗೆ ಅದರ ಅರಿವೇ ಆಗಿರಲಿಲ್ಲ.
ಅಂಗಡಿಯ ಹೊರಗೆ ಹಣ ಬಿದ್ದಿರುವುದನ್ನು ಗಮನಿಸಿದ ಗಣಪತಿ ನಾಯ್ಕ ಅವರು ಹಣವನ್ನು ಸುರಕ್ಷಿತವಾಗಿ ಇಟ್ಟುಕೊಂಡು, ಅದರ ನಿಜವಾದ ಮಾಲೀಕರನ್ನು ಪತ್ತೆಹಚ್ಚಲು ಅಂಗಡಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದರು.
ಪರಿಶೀಲನೆ ವೇಳೆ ವೃದ್ಧರೊಬ್ಬರ ಜೇಬಿನಿಂದ ಹಣ ಬಿದ್ದಿರುವುದು ಸ್ಪಷ್ಟವಾಗಿ ದಾಖಲಾಗಿರುವುದು ಕಂಡುಬಂತು.
ಬಳಿಕ ಅವರು ಸ್ಥಳೀಯರ ನೆರವಿನಿಂದ ಆ ವೃದ್ಧ ಪಳ್ಳಿಕೇರಿಯ ರಾಮಚಂದ್ರ ನಾಯ್ಕ ಗುರುತು ಹಾಗೂ ವಿಳಾಸವನ್ನು ಪತ್ತೆಹಚ್ಚಿ, ನೇರವಾಗಿ ಅವರ ಮನೆಗೆ ತೆರಳಿ ₹7 ಸಾವಿರವನ್ನು ಹಸ್ತಾಂತರಿಸಿದರು.
ಕಳೆದುಹೋದ ಹಣ ಮರಳಿ ಸಿಗುತ್ತದೆ ಎಂಬ ನಿರೀಕ್ಷೆಯೇ ಇಲ್ಲದಿದ್ದ ರಾಮಚಂದ್ರ ನಾಯ್ಕ ಅವರು ಗಣಪತಿ ನಾಯ್ಕ ಅವರ ಪ್ರಾಮಾಣಿಕತೆ ಹಾಗೂ ಮಾನವೀಯತೆಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಸ್ವಾರ್ಥ ಹೆಚ್ಚುತ್ತಿರುವ ಇಂದಿನ ಸಮಾಜದಲ್ಲಿ ಗಣಪತಿ ನಾಯ್ಕ ನದಿಭಾಗ ಅವರ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ

