ನೈಟ್ ಹಾಲ್ಟ್ ಬಸ್‌ಗೆ ಮಹಿಳಾ ನಿರ್ವಾಹಕಿ;

ನೈಟ್ ಹಾಲ್ಟ್ ಬಸ್‌ಗೆ ಮಹಿಳಾ ನಿರ್ವಾಹಕಿ;
ಹಾಲ್ಟ್ ಮಾತ್ರ ಬಸ್ಗೆ, ಸಿಬ್ಬಂದಿಗೆ ಅಲ್ಲ!
ಸಾರಿಗೆ ಇಲಾಖೆಯ ಹೊಸ ಗಣಿತ:
ಬಸ್ ಅಗಸೂರಲ್ಲಿ, ನಿರ್ವಾಹಕಿ ಅಂಕೋಲಾದಲ್ಲಿ!
ರಾಘು ಕಾಕರಮಠ
ಅಂಕೋಲಾ: ಮಹಿಳೆಯರ ಸುರಕ್ಷತೆ ನಮ್ಮ ಮೊದಲ ಆದ್ಯತೆ ಎನ್ನುವುದು ಸರ್ಕಾರಿ ಇಲಾಖೆಗಳ ಜನಪ್ರಿಯ ಘೋಷಣೆ. ಆದರೆ ಅಂಕೋಲಾ ಕೆಎಸ್‌ಆರ್‌ಟಿಸಿ ಘಟಕದ ಒಂದು ವ್ಯವಸ್ಥೆ ನೋಡಿದರೆ, ಆ ಘೋಷಣೆಯೂ ಬಸ್‌ನ ಹಿಂದಿನ ಗಾಜಿನ ಮೇಲಿನ ಸ್ಟಿಕ್ಕರ್‌ಗಷ್ಟೇ ಸೀಮಿತ ಅನಿಸುವಂತಾಗಿದೆ.
ಅ0ಕೋಲಾದಿ0ದ ಅಗಸೂರಿಗೆ ಸಂಚರಿಸುವ (ರೂಟ್ ಸಂಖ್ಯೆ 77-78) ನೈಟ್ ಹಾಲ್ಟಿಂಗ್ ಬಸ್‌ಗೆ ಮಹಿಳಾ ನಿರ್ವಾಹಕಿಯನ್ನು ನಿಯೋಜಿಸಿರುವುದು ಸಿಬ್ಬಂದಿಯಲ್ಲೇ ಅಚ್ಚರಿ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರತಿದಿನ ಸಂಜೆ 5 ಗಂಟೆಗೆ ಅಂಕೋಲಾದಿ0ದ ಹೊರಡುವ ಬಸ್, ಸುಮಾರು 6 ಗಂಟೆಗೆ ಅಗಸೂರಿಗೆ ತಲುಪುತ್ತದೆ. ಅಲ್ಲಿಗೆ ಬಸ್‌ನ ಕರ್ತವ್ಯ ಮುಗಿಯುತ್ತದೆ. ಆದರೆ ಮಹಿಳಾ ನಿರ್ವಾಹಕಿಯ ಕರ್ತವ್ಯ ಅಲ್ಲಿಂದಲೇ ಆರಂಭವಾಗುತ್ತದೆ. ಬಸ್‌ನಲ್ಲಿ ಮಹಿಳಾ ನಿರ್ವಾಹಕಿಗೆ ರಾತ್ರಿ ಉಳಿಯುವ ಅವಕಾಶ ಇಲ್ಲದ ಕಾರಣ, ಖಾಸಗಿ ವಾಹನ, ಪರಿಚಿತರ ವಾಹನ ಅಥವಾ ಸ್ವಂತ ಸ್ಕೂಟಿಯಲ್ಲಿ ಮತ್ತೆ ಅಂಕೋಲಾಕ್ಕೆ ಮರಳಬೇಕಾಗುತ್ತದೆ.
ಇದರಿಂದ ಕಥೆ ಮುಗಿಯುವುದಿಲ್ಲ. ಮರುದಿನ ಬೆಳಗ್ಗೆ 6.30 ಕ್ಕೆ ಅದೇ ಬಸ್ ಅಗಸೂರಿನಿಂದ ಹೊರಡಬೇಕಿರುವುದರಿಂದ, ಅದಕ್ಕೂ ಮುನ್ನ ಮತ್ತೆ ಅಗಸೂರಿಗೆ ತಲುಪುವುದು ಮಹಿಳಾ ನಿರ್ವಾಹಕಿಯ ಜವಾಬ್ದಾರಿ. ಅಂದರೆ ಒಂದು ಡ್ಯೂಟಿಗೆ ಎರಡು ಬಾರಿ ರಸ್ತೆ ಸವಾರಿ ಉಚಿತ.
ಪುರುಷ ನಿರ್ವಾಹಕರನ್ನು ಇದೇ ಬಸ್‌ಗೆ ನಿಯೋಜಿಸಿದರೆ ಅವರು ಬಸ್‌ನಲ್ಲಿಯೇ ರಾತ್ರಿ ತಂಗಿ ಬೆಳಗ್ಗೆ ಕರ್ತವ್ಯ ಮುಂದುವರಿಸಬಹುದು. ಆದರೆ ಇಲಾಖೆಯ ಮೇಧಾವಿಗಳು ಮಾತ್ರ ಯಾವುದೋ ರಾಮ-ಕೃಷ್ಣನ ಲೆಕ್ಕಾಚಾರವನ್ನು ಮನಸ್ಸಿನಲ್ಲಿ ಇಂಡುಕೊ0ಡು ಮಹಿಳಾ ನಿರ್ವಾಹಕಿಯರನ್ನು ಹೀಗೆ ಶೋಷಿಸುತ್ತಿರುವದು ಸರಿಯಲ್ಲ ಎಂಬ ಮಾತು ಕೇಳಿ ಬಂದಿದೆ.
ಮಹಿಳಾ ನಿರ್ವಾಹಕಿಯರನ್ನು ರಾತ್ರಿ ಹಾಲ್ಟಿಂಗ್ ಬಸ್‌ನ ಕರ್ತವ್ಯಕ್ಕೆ ನಿಯೋಜಿಸುವ ಹಿಂದಿನ ಲೆಕ್ಕಾಚಾರ ಮಾಡಿದವರು ಸಾರಿಗೆ ತಜ್ಞರೋ ಅಥವಾ ಸಾಹಸ ಕ್ರೀಡೆಯ ತರಬೇತುದಾರರೋ ಗೊತ್ತಾಗುತ್ತಿಲ್ಲ ಎಂದು ಸಿಬ್ಬಂದಿಯೇ ವ್ಯಂಗ್ಯವಾಡುತ್ತಿದ್ದಾರೆ.
ಮಹಿಳಾ ಸುರಕ್ಷತೆ ಕುರಿತು ದಿನವೂ ಜಾಗೃತಿ ಮೂಡಿಸುವ ಇಲಾಖೆಯೇ, ತನ್ನ ಸಿಬ್ಬಂದಿಯನ್ನು ರಾತ್ರಿ ಮತ್ತು ಮುಂಜಾನೆ ಒಂಟಿಯಾಗಿ ಓಡಾಡುವ ಪರಿಸ್ಥಿತಿಗೆ ತಳ್ಳಿರುವುದು ಎಷ್ಟು ಸಮಂಜಸ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ.
ಸಾರಿಗೆ ಘಟಕದ ಈ ಅಸಡ್ಡೆ ಸಾರ್ವಜನಿಕರಲ್ಲೂ ಚರ್ಚೆಗೆ ಗ್ರಾಸವಾಗಿದೆ. ಮಹಿಳಾ ಸಿಬ್ಬಂದಿಯ ಸುರಕ್ಷತೆಯನ್ನು ಆದ್ಯತೆಯಾಗಿ ಪರಿಗಣಿಸಿ, ನೈಟ್ ಹಾಲ್ಟ್ ಬಸ್ಗೆ ಪುರುಷ ನಿರ್ವಾಹಕರನ್ನು ನಿಯೋಜಿಸುವುದು ಅಥವಾ ಮಹಿಳಾ ಸಿಬ್ಬಂದಿಗೆ ಸುರಕ್ಷಿತ ವಸತಿ ವ್ಯವಸ್ಥೆ ಕಲ್ಪಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಸಾರಿಗೆ ಘಟಕದ ಅಸಡ್ಡೆಯ ಪರಮಾವಧಿಗೆ ಸಾರ್ವಜನಿಕರು ಕೂಡ ಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಿಳಾ ನಿರ್ವಾಹಕಿಯರ ಅಸಮಾಧಾನದ ಪಲ್ಲವಿಯು ಯಾವಾಗ ಇಲಾಖೆಯ ಕಿವಿ ಮುಟ್ಟುತ್ತದೆಯೋ ಕಾದು ನೋಡಬೇಕಿದೆ.

