ಅಂಕೋಲಾದಲ್ಲಿ ಕಂಡು ಬಂದ 4.5 ಕೆಜಿ ತೂಕದ ಅಪರೂಪದ ‘ಕಲ್ಲು ಜೆಂಜಿ ಏಡಿ

7894d942 0c31 48e2 b1c4 3799b7ea3643
ಈ ಸುದ್ದಿಯನ್ನು ನಿಮ್ಮವರೊಂದಿಗೆ ಹಂಚಿಕೊಳ್ಳಿ

Author

ಮಾದನಗೇರಿಯ ಪಾರ್ಮನಲ್ಲಿ ಸಿಕ್ಕ ವಿಶಿಷ್ಟ ಏಡಿ

ಅಂಕೋಲಾ: ಅರಬ್ಬಿ ಸಮುದ್ರದ ಸಂಗಮ ಪ್ರದೇಶಗಳಲ್ಲಿ ಮಾತ್ರ ಕಂಡುಬರುವ, ವಿದೇಶಿ ಮಾರುಕಟ್ಟೆಯಲ್ಲಿ ಅತ್ಯಂತ ಬೇಡಿಕೆ ಹೊಂದಿರುವ ಅಪರೂಪದ ‘ಕಲ್ಲು ಜೆಂಜಿ’ (ಕ್ರಾಬ್) 4.5 ಕೆಜಿ ತೂಕದ ಏಡಿಯು ಅಂಕೋಲಾದ ಮಾದನಗೇರಿಯಲ್ಲಿ ಪತ್ತೆಯಾಗಿದ್ದು, ಮೀನುಗಾರರು ಹಾಗೂ ಏಡಿ ಸಾಕಾಣಿಕೆದಾರರಲ್ಲಿ ಸಂತಸ ಮೂಡಿಸಿದೆ.

ಸಾಂಪ್ರದಾಯಿಕ ಮೀನುಗಾರಿಕೆಯ ವೇಳೆ ಸುಮಾರು 4.5 ಕೆಜಿ ತೂಕದ ಈ ವಿಶಿಷ್ಟ ಏಡಿ ದೊರೆತಿದ್ದು, ತನ್ನ ಗಾತ್ರ ಹಾಗೂ ಗುಣಮಟ್ಟದಿಂದ ಎಲ್ಲರ ಗಮನ ಸೆಳೆದಿದೆ. ಅಂಕೋಲಾದ ಮಾದನಗೇರಿಯ ಖ್ಯಾತ ಏಡಿ ಸಾಕಾಣಿಕೆದಾರ ಭೈರವ ನಾಗಪ್ಪ ಹರಿಕಂತ್ರ ಅವರ ಪಾರ್ಮ್ನಲ್ಲಿ ಈ ಅಪರೂಪದ ಏಡಿ ಕಂಡುಬAದಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಮಾದನಗೇರಿ, ಬೇಲೆಕೇರಿ, ತದಡಿ, ಹೊಸ್ಕಟ್ಟಾ, ಅಘನಾಶಿನಿ, ಬಾಡಾ, ಕಾಗಾಲ, ಕುಮಟಾ ಹಾಗೂ ಹೊನ್ನಾವರ ಭಾಗಗಳ ಸಮುದ್ರ-ನದಿ ಸಂಗಮ ಪ್ರದೇಶಗಳಲ್ಲಿ ಹಾಗೂ ಏಡಿ ಪಾರ್ಮ್ಗಳಲ್ಲಿ ಬೆಳೆಯುವ ಈ ಕಲ್ಲು ಜೆಂಜಿಗೆ ವಿದೇಶದಲ್ಲಿ ವಿಶೇಷ ಬೇಡಿಕೆ ಇದೆ. ಇಲ್ಲಿಂದ ಮಂಗಳೂರು ಹಾಗೂ ಚೆನ್ನೈ ಮೂಲಕ ವಿಮಾನ ಮಾರ್ಗದಲ್ಲಿ ಸಿಂಗಾಪುರ, ಥೈಲ್ಯಾಂಡ್ ಮತ್ತು ಮಲೇಶಿಯಾ ದೇಶಗಳಿಗೆ ರಫ್ತು ಮಾಡಲಾಗುತ್ತದೆ.

ಮಾದನಗೇರಿಯ ಆನಂದು ಹರಿಕಂತ್ರ, ಭೈರವ ಹರಿಕಂತ್ರ ಹಾಗೂ ಮೋಹನ ಹರಿಕಂತ್ರ ಸಹೋದರರು ಕಳೆದ ಮೂರು ದಶಕಗಳಿಂದ ಏಡಿ ಸಾಕಾಣಿಕೆ ಹಾಗೂ ಪೂರೈಕೆ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಗುಣಮಟ್ಟದ ಏಡಿಗಳ ಮೂಲಕ ವಿದೇಶಿ ಮಾರುಕಟ್ಟೆಯಲ್ಲಿ ಅಂಕೋಲಾಕ್ಕೆ ಉತ್ತಮ ಹೆಸರು ತಂದುಕೊಟ್ಟಿದ್ದಾರೆ.

ಕೊರೊನಾ ಅವಧಿಯಲ್ಲಿ ವಿಮಾನ ಸಂಚಾರ ಸ್ಥಗಿತಗೊಂಡ ಪರಿಣಾಮ ಏಡಿ ರಫ್ತು ಸಂಪೂರ್ಣ ಕುಸಿತ ಕಂಡಿತ್ತು. ಇದರಿಂದ ಸಾಕಾಣಿಕೆದಾರರು ಹಾಗೂ ವ್ಯಾಪಾರಿಗಳು ಭಾರೀ ನಷ್ಟ ಅನುಭವಿಸಿದ್ದರು. ಆದರೆ ಈಗ ವಿಮಾನ ಸೇವೆ ಸಹಜ ಸ್ಥಿತಿಗೆ ಮರಳಿರುವುದರಿಂದ ಮತ್ತೆ ವಿದೇಶಿ ಮಾರುಕಟ್ಟೆಗೆ ಏಡಿ ರಫ್ತು ಚುರುಕುಗೊಂಡಿದ್ದು, ಉದ್ಯಮಕ್ಕೆ ಹೊಸ ಚೈತನ್ಯ ಬಂದಿದೆ.

ಆದಾಗ್ಯೂ, ಪರಿಸರ ಬದಲಾವಣೆ ಹಾಗೂ ಇತರ ಕಾರಣಗಳಿಂದ ವರ್ಷದಿಂದ ವರ್ಷಕ್ಕೆ ಕಲ್ಲು ಜೆಂಜಿಗಳ ಲಭ್ಯತೆ ಕಡಿಮೆಯಾಗುತ್ತಿರುವುದು ಉದ್ಯಮಿಗಳ ಆತಂಕಕ್ಕೆ ಕಾರಣವಾಗಿದೆ. ಬೇಡಿಕೆ ಹೆಚ್ಚುತ್ತಿದ್ದರೂ ಉತ್ಪಾದನೆ ಕುಸಿಯುತ್ತಿರುವುದು ಮುಂದಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ಸವಾಲಾಗಿ ಪರಿಣಮಿಸುವ ಸಾಧ್ಯತೆಯಿದೆ.

ಹಲವು ವರ್ಷಗಳಿಂದ ಇಲ್ಲಿನ ಕಲ್ಲು ಜೆಂಜಿಗಳನ್ನು ಏಜೆಂಟರ ಮೂಲಕ ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಈ ವರ್ಷ ಉತ್ತಮ ಬೆಲೆಯೂ ಸಿಕ್ಕಿದೆ. ಆದರೆ ವರ್ಷದಿಂದ ವರ್ಷಕ್ಕೆ ಏಡಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಭೈರವ ನಾಗಪ್ಪ ಹರಿಕಂತ್ರ.

ಏಡಿ ಪೂರೈಕೆದಾರ, ಮಾದನಗೇರಿ.

ನಕಲಿಸುವ ಬದಲು ಹಂಚಿಕೊಳ್ಳಿ